ಮೂಗೂರು
	ಕರ್ನಾಟಕ ರಾಜ್ಯದ ಮೈಸೂರು ಜಿಲ್ಲೆಯ ತಿರುಮಕೂಡಲು ನರಸೀಪುರ ತಾಲ್ಲೂಕಿನ ಒಂದು ಪ್ರಾಚೀನ ಗ್ರಾಮ, ಹೋಬಳಿ ಕೇಂದ್ರ. ತಿರುಮಕೂಡಲು ನರಸೀಪುರದ ಆಗ್ನೇಯಕ್ಕೆ 10 ಕಿಮೀ ದೂರದಲ್ಲಿದೆ. ಇಲ್ಲಿ ಆರು ದೇವಾಲಯಗಳಿವೆ. ಅವುಗಳಲ್ಲಿ ಮುಖ್ಯವಾದವು ದೇಶೇಶ್ವರ, ನಾರಾಯಣ ಮತ್ತು ತಿಬ್ಬಾದೇವಿ. ದೇಶೇಶ್ವರ ದೇವಾಲಯ ಬಹುಶಃ ಚೋಳರ ಕಾಲಕ್ಕೆ ಸೇರಿದ್ದು. ಇದರ ಉತ್ತರಕ್ಕೆ (ತ್ರಿಪುರಾಂಬ, ತ್ರಿಪುರಸುಂದರಿ) ದೇವಾಲಯವಿದೆ. ಆರಂಭದಲ್ಲಿ ಇದಕ್ಕೆ ಬರೀಗರ್ಭಗೃಹವಿದ್ದು ಮಿಕ್ಕ ಭಾಗಗಳನ್ನು ಹೊಯ್ಸಳರ ಕಾಲದಲ್ಲಿ ಕಟ್ಟಿ ಪೂರೈಸಿದಂತೆ ತೋರುತ್ತದೆ. ನವರಂಗ, ಮುಖಮಂಟಪ, ಮಹಾದ್ವಾರ ಇಲ್ಲಿರುವ ಪಾಳೆಯಗಾರರ ವಿಗ್ರಹಗಳು ಮತ್ತು ಪ್ರಾಕಾರ ಇವೆಲ್ಲ ಹೆಚ್ಚು ಕಡಿಮೆ ವಿಜಯನಗರ ಕಾಲದವು.

	ಇಲ್ಲಿರುವ ನಾರಾಯಣಸ್ವಾಮಿ ದೇವಾಲಯ ಹೊಯ್ಸಳರ ಕಾಲದ್ದು. ಆವರಣದ ಒಳಗಡೆ ಇರುವ ಈ ದೇವಾಲಯ ಗರ್ಭಗೃಹ, ಸುಕನಾಸಿ, ನಾಲ್ಕುಕಂಬಗಳಿರುವ ಒಂದು ನವರಂಗ ಮತ್ತು ಒಂದು ಮುಖಮಂಟಪವನ್ನೊಳಗೊಂಡಿದೆ. ನವರಂಗದ ಕಂಬಗಳು ಉರುಳೆಯಾಕಾರವಾಗಿದ್ದು ಬೆಣಚುಕಲ್ಲಿನಿಂದ ಮಾಡಲ್ಪಟ್ಟಿವೆ. ಇಲ್ಲಿ ಆದಿನಾಥ ಮತ್ತು ಪಾಶ್ರ್ವನಾಥರ ಬಸದಿಗಳಿವೆ.

	ಮೂಗೂರಿನಲ್ಲಿ ಪ್ರತಿವರ್ಷ ಡಿಸೆಂಬರ್ ಅಥವಾ ಜನವರಿಯಲ್ಲಿ ನಡೆಯುವ ತಿಬ್ಬಾದೇವಿ ದೇವಾಲಯದ ಉತ್ಸವ ಸಾವಿರಾರು ಜನರನ್ನು ಆಕರ್ಷಿಸುತ್ತದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ